ಕೊರಿಯದ ಪುರಾತತ್ವ, ಕಲೆ	

ಚೀನ ಮತ್ತು ಜಪಾನ್‍ಗಳ ನಡುವೆ ಇರುವ ಕೊರಿಯದ ಭೌಗೋಳಿಕ ನೆಲೆ ಅದರ ಪ್ರಾಗಿತಿಹಾಸದ ಮೇಲೆ ಬಹಳ ಪ್ರಭಾವ ಬೀರಿದೆ. ಬಹಳ ಪುರಾತನ ಮತ್ತು ಉನ್ನತಮಟ್ಟದ ಚೀನೀ ಸಂಸ್ಕøತಿಗಳ ಪ್ರಭಾವಕ್ಕೀಡಾಗಿದ್ದರೂ ನೆರೆಯ ಜಪಾನಿನಂತೆ ಇಲ್ಲೂ ವೈಯಕ್ತಿಕತೆ ಕಾಣಬರುತ್ತದೆ.

ಪೂರ್ವ ಮತ್ತು ಮಧ್ಯಶಿಲಾಯುಗಗಳ ಅವಶೇಷಗಳು ಇಲ್ಲಿ ದೊರಕಿಲ್ಲ. ಕ್ರಿ.ಪೂ. 3ನೆಯ ಸಹಸ್ರಮಾನದಲ್ಲಿ ಉತ್ತರ ಏಷ್ಯದ ಪ್ರಭಾವಕ್ಕೊಳಗಾದ ವನಶಿಲಾಯುಗ ಸಂಸ್ಕøತಿಕಾಲದಲ್ಲಿ ಜನರು ಬೇಟೆ ಮತ್ತು ಮೀನುಗಾರಿಕೆಯಿಂದ ಜೀವಿಸುತ್ತಿದ್ದರು. ಮಡಕೆ ಕುಡಿಕೆಗಳೂ ದೊಡ್ಡಕಲ್ಲುಗಳಿಂದ ನಿರ್ಮಿತವಾದ ಸಮಾಧಿ ಅಥವಾ ವೇದಿಕೆಯ ರೀತಿಯ ಕಟ್ಟಡಗಳೂ ರೂಢಿಗೆ ಬಂದುವು. ಧನಿಕರಾದ ಅನುವಂಶಿಕನಾಯಕರ ಆಡಳಿತಕ್ಕೊಳಪಟ್ಟಿದ್ದ ಈ ಸಮಾಜದಲ್ಲಿ ಭೂತಪ್ರಜೆ ಜಾರಿಯಲ್ಲಿತ್ತು. ಮಾಂತ್ರಿಕರ ಪ್ರಭಾವ ನೆಲೆಸಿತ್ತು. ಚಾರಿತ್ರಿಕ ಯುಗದಲ್ಲಿ ಬೌದ್ಧ ಮತ್ತು ಕಾನ್‍ಫ್ಯೂಷಸ್ ಮತಗಳ ಪ್ರಭಾವ ಬೆಳೆದಾಗಲೂ ಭೂತಗಳ ಮತ್ತು ಮಾಂತ್ರಿಕರ ಪ್ರಭಾವಗಳು ಉಳಿದುಬಂದುವು.

ಕ್ರಿ.ಪೂ. 4ನೆಯ ಶತಮಾನದಲ್ಲಿ ಚೀನದ ಷುಂಗ್-ನು ಜನರಿಂದ ಒತ್ತರಿಸಲ್ಪಟ್ಟ ಮಂಚೂರಿಯದ ಟುಂಗ್-ಸಿಕ್ ಬುಡಕಟ್ಟಿನವರು ಕಂಚು ಮತ್ತು ಕಬ್ಬಿಣ ಲೋಹಗಳನ್ನು ತಂದು ವ್ಯವಸಾಯ-ಪೂರ್ವ ನವಶಿಲಾಯುಗ ಜೀವನರೀತಿಯನ್ನು ಕೊನೆಗಾಣಿಸಿದರು. ಕ್ರಿ.ಪೂ 3ನೆಯ ಶತಮಾನದಿಂದ ವ್ಯವಸಾಯ ಅಭಿವೃದ್ಧಿ ಹೊಂದಿ ಕ್ರಿ.ಪೂ. 190ರಲ್ಲಿ ಚೊಸೊನ್ ರಾಜ್ಯ ಸ್ಥಾಪಿತವಾಯಿತು. ಕ್ರಿ,ಪೂ. 10ರಲ್ಲಿ ಈ ರಾಜ್ಯ ಕೊನೆಗಂಡು ಚೀನಿಯರ ಲೋ-ಲಾಂಗ್ ವಸಾಹತು ಸ್ಥಾಪಿತವಾಯಿತು. ಆ ಕಾಲದಲ್ಲಿ ಹುಟ್ಟಿದ ಕೊಗುರ್ಯೋ ರಾಜ್ಯದ ಕಲೆಗಳಲ್ಲಿ ಚೀನೀ ಪ್ರಭಾವಕ್ಕೊಳಗಾದ ಟುಂಗ್-ಕೌ ಎಂಬಲ್ಲಿಯ ಸಮಾಧಿಗಳ ಗೋಡೆಗಳ ಮೇಲಿನ ಕ್ರಿ,ಶ. 5-6ನೆಯ ಶತಮಾನಗಳ ಬೇಟೆ ಅಥವಾ ನೃತ್ಯ-ಗೀತೆ ಪಂಗಡಗಳ ವರ್ಣಚಿತ್ರಗಳು ಮುಖ್ಯವಾದುವು. 384ರಲ್ಲಿ ಬೌದ್ಧಮತದ ಪ್ರವೇಶಾನಂತರ ಸ್ಥಾಪಿತವಾದ ಪೆಕ್ಚೆ ರಾಜ್ಯದಲ್ಲಿ 6-7ನೆಯ ಶತಮಾನದಲ್ಲಿ ಜಪಾನೀ ಪ್ರಭಾವದ ಕುಡರ-ಕನ್ನಾನ್ ಎಂಬ ವರ್ಣಲೇಪಿತ ಮರದಶಿಲ್ಪ ಕೊರಿಯ ಕಲೆಯ ಉತ್ತಮ ಪ್ರತೀಕವಾಗಿದೆ. ಸಿಲ್ಲಾ ರಾಜ್ಯದಲ್ಲಿ ಅಲೆಮಾರಿ ಜೀವನದ ಪ್ರಭಾವ ಹೆಚ್ಚು. ಅಲ್ಲಿಯ ಸಮಾಧಿಗಳಲ್ಲಿಯ ಶಿಲ್ಪಗಳು ಒರಟಾದರೂ ಜೀವಂತ ಹಾಸ್ಯಭರಿತವಾಗಿವೆ.	ಚೀನೀಯರ ಪ್ರಕೃತಿದೃಶ್ಯಗಳ ಚಿತ್ರಣವೂ ಪ್ರತಿಬಿಂಬವಾಗಿದೆ. ಕ್ಯೊಂಗ್ಯು ಬಳಿಯ ಪುಲ್ಲುಕ್-ಸಾ ವಿಹಾರದ ಅವಶೇಷಗಳೂ ಸೊಕ್ಕುಲ್-ಆಮ್‍ನ ಗುಹಾಂತರ್ದೇವಾಲಯಗಳ ಉಬ್ಬುಕೆತ್ತನೆಗಳೂ 751ರ ಸುಮಾರಿನ ಬುದ್ಧ, ಬೋಧಿಸತ್ವ್ತ, ಅರ್ಹತ ಮತ್ತು ದೇವರಾಜರ ಪ್ರತಿಮೆಗಳೂ ಅಮೋಘವಾಗಿದ್ದು, ಟ್ಯಾಂಗ್ ಕಾಲೀನ ಚೀನಿ ಪ್ರಭಾವ ಕಂಡುಬಂದರೂ ಹೆಚ್ಚು ಘನತೆಯನ್ನು ಹೊಂದಿವೆ. ರಾಜಾಶ್ರಯದಲ್ಲಿ ಕಲೆಗಾರರು ಸಹಜವಾದ ಮತ್ತು ವರ್ಣಪ್ರಧಾನವಾದ ವ್ಯಕ್ತಿಗಳ ವರ್ಣಚಿತ್ರಗಳನ್ನು ನಿರ್ಮಿಸುತ್ತಿದ್ದರು. ಅನಂತರದ ಕೊರ್ಯೊ ರಾಜ್ಯದ ಕಾಲದಲ್ಲಿ ಬೌದ್ಧಶಿಲ್ಪಗಳು ಅವನತಮುಖವಾಗಿ ಸಾಮಾಜಿಕ ವಸ್ತುಗಳಿಗೆ ಪ್ರಾಧಾನ್ಯ ದೊರೆತು ಪ್ರಕೃತಿದೃಶ್ಯಗಳ ಚಿತ್ರಣ ಮತ್ತು ಮಣ್ಣಿನ ಪಾತ್ರೆಗಳ (ಸೆಲಡಾನ್ ವೇರ್) ನಿರ್ಮಾಣ ಕಂಡುಬರುತ್ತವೆ. 15-16ನೆಯ ಶತಮಾನಗಳಲ್ಲಿ ರಾಜಾಶ್ರಯದಲ್ಲಿ ಚೀನೀಪ್ರಭಾವಿತ ಚಿತ್ರ ಮತ್ತು ಶಿಲ್ಪಕಲೆಗಳು ಬೆಳೆದುವಲ್ಲದೆ ಜನಸಾಮಾನ್ಯರ ಕಲೆಯಲ್ಲಿ ಸರಳತೆ ಮತ್ತು ಉಪಯುಕ್ತತೆಗಳಿಗೆ ಪ್ರಾಮುಖ್ಯ ದೊರಕಿತು. ಸೆಲಡಾನ್ ಪಾತ್ರೆಗಳ ನಿರ್ಮಾಣಕಲೆ ಅವನತಮುಖವಾಯಿತು. 17-19ನೆಯ ಶತಮಾನಗಳ ಸ್ವತಂತ್ರ ಮನೋಭಾವ ಅವರ ಕಲೆಯಲ್ಲೂ ಕಂಡುಬಂದು, ಚೀನೀಪ್ರಭಾವಗಳು ದೂರವಾಗಿ ಜನರ ನಿತ್ಯಜೀವನ ರೂಪಿಸುವ ಚಿತ್ರಗಳು ನಿರ್ಮಿತವಾದುವು. ಸೆಲಡಾನ್ ಪಾತ್ರೆಗಳ ನಿರ್ಮಾಣ ಕಲೆಯಲ್ಲಿ ತಾಂತ್ರಿಕ ಅವನತಿ ಮುಂದುವರಿದರೂ ಭಾವಪ್ರಧಾನ ಮತ್ತು ಧೀರೋದಾತ್ರ ಶೈಲಿಯ ಚಿತ್ರಣ ಕಂಡುಬರುತ್ತದೆ. 20ನೆಯ ಶತಮಾನದಲ್ಲಿ ರಾಜಕೀಯ ದುರ್ದೆಶೆಗೊಳಗಾದ ಈ ದೇಶದ ಕಲೆಯ ಸಮಗ್ರ ವಿಮರ್ಶೆ ಸಾಧ್ಯವಿಲ್ಲವಾದರೂ ಯೂರೋಪಿನಲ್ಲಿ ತರಬೇತು ಪಡೆದಿರುವ ಇಲ್ಲಿಯ ಕಲೆಗಾರರ ಕೃತಿಗಳು ಪ್ರಭಾವಶಾಲಿಗಳಾಗಬಹುದು. 				 (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ